ಮಹಾರಾಷ್ಟ್ರ : ಚಲಿಸುತ್ತಿದ್ದ ಬಸ್ ಏಕಾಏಕಿ ಧಗಧಗಿಸಿದ ಪರಿಣಾಮ 12 ಜನ ಸಜೀವ ದಹನವಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಪುಸಾದ್ ನಿಂದ ಮುಂಬೈಗೆ ಹೊರಟಿದ್ದ ಸ್ಲೀಪರ್ ಕೋಚ್ ಬಸ್, ಟ್ಯಾಂಕರ್ ಗೆ ಡಿಕ್ಕಿ ಹೊಡೆದು ಬೆಂಕಿಯ ಕೆನ್ನಾಲಿಗೆ ಆಹುತಿಯಾಗಿದೆ. ಬಸ್ ನಲ್ಲಿದ್ದ 30 ಪ್ರಯಾಣಿಕರ ಪೈಕಿ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟೊಂದು ದೊಡ್ಡ ಅನಾಹುತಕ್ಕೆ ಬಸ್ ನಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೇ ಇರೋದೇ ಕಾರಣವೆನ್ನಲ್ಲಾಗ್ತಿದೆ.
ಇನ್ನೇನು ಮೂರ್ನಾಲ್ಕು ಗಂಟೆ ಕಳೆದಿದ್ರೆ, 30 ಮಂದಿ ಪ್ರಯಾಣಿಕರು ಸೇಫಾಗಿ ಮುಂಬೈ ತಲುಪುತ್ತಿದ್ರು.. ಆದ್ರೆ ತಡರಾತ್ರಿ ಮಹಾರಾಷ್ಟ್ರದ ಪುಸಾದ್ ನಿಂದ ತೆರಳಿದ್ದ ಬಸ್, ಬೆಳಗಿನ ಜಾವ ಬೆಂಕಿಯ ಕೆನ್ನಾಲೆಗೆ ಧಗಧಗಿಸಿ ಹೊತ್ತಿ ಉರಿದಿತ್ತು. ನಿದ್ರೆಗೆ ಜಾರಿದ್ದ ಕೆಲ ಪ್ರಯಾಣಿಕರು ಜವರಾಯನ ಅಟ್ಟಹಾಸಕ್ಕೆ ಜೀವಂತವಾಗಿ ಬದುಕುಳಿಯಲೇ ಇಲ್ಲ.ನಾಸಿಕ್ ನಂದೂರ್ ನಾಕಾ ಬಳಿ ನೋಡನೋಡುತ್ತಿದ್ದಂತೆ ಸ್ಲೀಪರ್ ಕೋಚ್ ಬಸ್ ಹೊತ್ತಿ ಉರಿದಿದೆ. ಪರಿಣಾಮ ಬೆಂಕಿಯ ಕೆನ್ನಾಲೆಗೆ 11 ಮಂದಿ ಸ್ಥಳದಲ್ಲೇ ಸುಟ್ಟು ಹೋಗಿದ್ದಾರೆ.
ಸುಮಾರು 5.20ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಕೂಡಲೇ ಸ್ಥಳದಲ್ಲಿದ್ದ ಜನ, ಬೆಂಕಿ ನಂದಿಸಲು ಯತ್ನಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಮೊದಲೇ ತುಂಬಿದ್ದ ಡೀಸೆಲ್ ಟ್ಯಾಂಕರ್ ಇದ್ದ ಕಾರಣ ಬಸ್ ಡಿಕ್ಕಿ ಹೊಡೆಯುತ್ತಿದ್ದಂತೆ ಬೆಂಕಿ ಹೆಚ್ಚಾಗಿದೆ. ಮಲಗಿದ್ದ ಪ್ರಯಾಣಿಕರು, ಮೇಲೇಳುವ ಮುನ್ನವೇ ಬಸ್ ತುಂಬಾ ಬೆಂಕಿ ಆವರಿಸಿದೆ. ಕೆಲ ಪ್ರಯಾಣಿಕರು ಇಳಿದ್ರೆ, 11 ಮಂದಿ ಬಸ್ನಲ್ಲಿ ಸಿಲುಕಿ ಸುಟ್ಟು ಹೋಗಿದ್ದಾರೆ. ಗಾಯಗೊಂಡವರನ್ನ ನಾಸಿಕ್ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿತ್ತು. ಆದ್ರೆ ಅದರಲ್ಲಿ ಮತ್ತೋರ್ವ ಪ್ರಾಣ ಬಿಟ್ಟಿದ್ದಾನೆ. 25ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ.
ನಾಸಿಕ್ ಬಸ್ ದುರಂತಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅತ್ತ ರಾಜ್ಯ ಸರ್ಕಾರದಿಂದಲೂ ಮೃತರಿಗೆ 5 ಲಕ್ಷ, ಗಾಯಗೊಂಡವರಿಗೆ 2 ಲಕ್ಷ ಪರಿಹಾರವನ್ನ ನೀಡಲಾಗಿದೆ. ಗಾಯಗೊಂಡವರಿಗೆ ಸರ್ಕಾರವೇ ಚಿಕಿತ್ಸೆ ವೆಚ್ಚ ಭರಿಸಲಿದೆ ಅಂತ ಸಿಎಂ ಏಕನಾಥ್ ಶಿಂಧೆ ಮಾಹಿತಿ ನೀಡಿದ್ದಾರೆ.
PublicNext
08/10/2022 11:10 pm