ದಾವಣಗೆರೆ: ಬೈಕ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ತಾಯಿ ಮತ್ತು ಮಗಳು ಮೃತಪಟ್ಟ ದಾರುಣ ಘಟನೆ ದಾವಣಗೆರೆಯ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಬರುವ ಕುಂದುವಾಡ ಗ್ರಾಮದ ಬಳಿ ನಡೆದಿದೆ.
ಶಿವಮೊಗ್ಗ ಮೂಲದ ಒಂದೇ ಕುಟುಂಬದ ಮೂವರು ದಾವಣಗೆರೆಗೆ ಬರುವ ವೇಳೆ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ತಾಯಿ, ಮಗು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.
ಬೈಕ್ ಸ್ಕಿಡ್ ಆಗಿ ಲಾರಿ ಚಕ್ರಕ್ಕೆ ಬಿದ್ದ ಪರಿಣಾಮ ಈ ದುರ್ಘಟನೆ ನಡೆದಿದ್ದು, ಅಪಘಾತ ನಡೆದ ಬಳಿಕ ಸ್ಥಳೀಯ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಹೈವೇ ರಸ್ತೆಯ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಈ ಅಪಘಾತ ನಡೆದಿದೆ. ಇದಕ್ಕೆ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಮಗಾರಿಯನ್ನು ಶೀಘ್ರ ಮುಗಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ದಾವಣಗೆರೆ ಉತ್ತರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
PublicNext
04/05/2022 05:48 pm