ಬೆಂಗಳೂರು : ಮಲಗಿದ್ದ ಏಳು ವರ್ಷದ ಬಾಲಕಿ ಮೇಲೆ ಟೆಂಪೊ ಹತ್ತಿಸಿರೋ ಘಟನೆ ಇಂದು ಬೆಳಿಗ್ಗೆ ಬೆಂಗಳೂರಿನ ಸಿಟಿ ಮಾರ್ಕೆಟ್ ನಲ್ಲಿ ನಡೆದಿದೆ. ಇಂದು ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದ್ದು. ತಮಿಳುನಾಡು ಮೂಲದ ಶಿವನ್ಯ ಮೃತಪಟ್ಟ ಬಾಲಕಿಯಾಗಿದ್ದಾಳೆ. ಮೃತ ಬಾಲಕಿಯ ಕುಟುಂಬಸ್ಥರು ತಮಿಳುನಾಡಿನ ಹಕ್ಕಿಪಿಕ್ಕಿ ಜನಾಂಗದವರಾಗಿದ್ದಾರೆ.
ರಸ್ತೆ ಮೇಲೆ ಸಣ್ಣ ಪುಟ್ಟ ಅಲಂಕಾರಿಕ ವಸ್ತುಗಳನ್ನ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮೂರ್ನಾಲ್ಕು ದಿನಗಳ ಹಿಂದೆ ಹುಸ್ಕೂರು ಜಾತ್ರೆಗೆ ಬಂದಿದ್ದರು.
ಬಳಿಕ ಊರಿಗೆ ವಾಪಸ್ ಹೋಗಲು ಬಸ್ ಸಿಗದೆ ಮಾರ್ಕೆಟ್ ನಲ್ಲಿ ತಂಗಿದ್ರು. ಈ ವೇಳೆ ಬೊಲೋರೋ ಟೆಂಪೋದಲ್ಲಿ ಹೂ ಹಾಕಿಕೊಂಡು ಬಂದಿದ್ದ ಚಾಲಕ ಅನ್ ಲೋಡ್ ಮಾಡಿ ಹೊರಡಲು ಮುಂದಾಗಿದ್ದ. ರಸ್ತೆ ಬದಿಯಲ್ಲಿ ಮಲಗಿದ್ದ ಬಾಲಕಿಯನ್ನ ಗಮನಿಸದ ಟೆಂಪೋ ರಿವರ್ಸ್ ಮಾಡುವಾಗ ಬಾಲಕಿ ಮೇಲೆ ಗಾಡಿ ಹತ್ತಿಸಿದ್ದಾನೆ.
ಬಾಲಕಿ ಜೋರಾಗಿ ಕಿರುಚುತಿದ್ದಂತೆ ಟೆಂಪೋ ಬಿಟ್ಟು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಆಸ್ಪತ್ರೆಗೆ ಸಾಗಿಸೋ ಮಾರ್ಗ ಮಧ್ಯೆ ಬಾಲಕಿ ಶಿವನ್ಯ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಸಿಟಿ ಮಾರ್ಕೆಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
PublicNext
29/03/2022 10:38 am