ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿನ ಟ್ರಾಫಿಕ್ ಸಮಸ್ಯೆಯು ನಗರದಲ್ಲಿ ಶೇ 3ರಷ್ಟು ವಿಚ್ಛೇದನ ಪ್ರಕರಣಗಳಿಗೆ ಕಾರಣವಾಗುತ್ತಿದೆ ಎಂದು ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಹೇಳಿದ್ದಾರೆ. ಈ ಹೇಳಿಕೆಯಿಂದ ಅಮೃತಾ ಫಡ್ನವೀಸ್ ಅವರು ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಮುಂಬೈನ ರಸ್ತೆ ಹಾಗೂ ಸಂಚಾರ ದಟ್ಟಣೆ ಸ್ಥಿತಿಗತಿಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮುಂಬೈನಲ್ಲಿ ಟ್ರಾಫಿಕ್ ಜಾಮ್ ಕಾರಣದಿಂದ ಜನರಿಗೆ ತಮ್ಮ ಕುಟುಂಬಕ್ಕೆ ಸಾಕಷ್ಟು ಸಮಯ ನೀಡಲು ಸಾಧ್ಯವಾಗದೆ ಶೇಕಡಾ ಮೂರರಷ್ಟು ಡೈವೋರ್ಸ್‌ಗಳು ಉಂಟಾಗುತ್ತಿವೆ ಎನ್ನುವುದು ನಿಮಗೆ ತಿಳಿದಿದೆಯೇ? ನಾನು ಇದನ್ನು ಸಾಮಾನ್ಯ ಪ್ರಜೆಯಾಗಿ ಹೇಳುತ್ತಿದ್ದೇನೆ. ಒಮ್ಮೆ ನಾನು ಮನೆಯಿಂದ ಹೊರಗೆ ಬಂದರೆ ರಸ್ತೆಗುಂಡಿಗಳು, ಸಂಚಾರ ದಟ್ಟಣೆಯಂತಹ ಅನೇಕ ಸಮಸ್ಯೆಗಳನ್ನು ಕಾಣುತ್ತೇನೆ' ಎಂದು ಹೇಳಿದ್ದಾರೆ.
ಇನ್ನು ಅಮೃತಾ ಅವರ ಹೆಸರನ್ನು ಉಲ್ಲೇಖಿಸದೆ ಪರೋಕ್ಷವಾಗಿ ಚಾಟಿ ಬೀಸಿರುವ ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ, "ಇದು ಈ ದಿನದ ಅತ್ಯುತ್ತಮ (ಕು)ತರ್ಕ' ಎಂದು ಲೇವಡಿ ಮಾಡಿದ್ದಾರೆ. ಅಮೃತಾ ಫಡ್ನವೀಸ್ ಅವರ ಹೇಳಿಕೆಯು ಸಾಮಾಜಿಕ ಜಾಲತಾಣ ಬಳಕೆದಾರರ ತಮಾಷೆಯ ಹಾಗೂ ಮೀಮ್ ವಸ್ತುವಾಗಿ ಪರಿಣಮಿಸಿದೆ.
PublicNext
05/02/2022 04:54 pm