ಸಂಕ್ರಾಂತಿ ಹಬ್ಬದ ಪ್ರಯುಕ್ತ ಇಂದು ಕೃಷ್ಣಾ ನದಿಯಲ್ಲಿ ಈಜಾಡಲು ಹೋಗಿದ್ದ ಕುಟುಂಬಯೊಂದರಲ್ಲಿ ಓರ್ವಳು ನೀರಲ್ಲಿ ಮುಳುಗಿ ಶವವಾಗಿ ಪತ್ತೆಯಾಗಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶೆಳ್ಳಗಿ ಗ್ರಾಮದ ಸಮೀಪವಿರುವ ಕೃಷ್ಣಾ ನದಿಗೆ ಒಟ್ಟು ಎಂಟು ಜನ ಕೊಟ್ರೆಪ್ಪ ಅವರ ಕುಟುಂಬಸ್ಥರು ತಮ್ಮೂರು ರುಕ್ಮಾಪುರದಿಂದ ತೆರಳಿದ್ದರು. ನೀರಿನ ಆಳ ಗೊತ್ತಾಗದೆ ನದಿಗೆ ಇಳಿದ ಮಗಳು ಕಾವೇರಿ ಪ್ರಾಣ ಬಿಟ್ಟಿದ್ದಾಳೆ.
ಇನ್ನು ಕೊಟ್ರೆಪ್ಪ ಹಾಗೂ ಪತ್ನಿ ಸುರಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೊಟ್ರೆಪ್ಪ ಅವರ ತಂಗಿಯ ಮಗಳು ಮೂರನೇ ತರಗತಿ ಓದುತ್ತಿರೋ ಭಾನುಪ್ರಿಯಾಗೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನುಳಿದವರು ಅರೋಗ್ಯವಾಗಿದ್ದರೆ ಎಂದು ತಿಳಿದು ಬಂದಿದ್ದು, ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿ ಕಾವೇರಿ ಮೃತದೇಹವನ್ನು ಹೊರತೆಗೆದಿದ್ದಾರೆ. ಇನ್ನು ಮೃತ ಕಾವೇರಿ ಖಾಸಗಿ ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಶಿಕ್ಷಕಿ ನೀರುಪಾಲದ ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಪುತ್ರ ಹಾಗೂ ಕಾಂಗ್ರೆಸ್ ಮುಖಂಡ ರಾಜಾ ವೇಣುಗೋಪಾಲ ನಾಯಕ ಅವರು, ಶೋಧ ಕಾರ್ಯದ ಸ್ಥಳದಲ್ಲೇ ಇದ್ದು ಸಾರ್ವಜನಿಕರ ಸಮ್ಮುಖದಲ್ಲಿ ಮೃದೇಹವವನ್ನ ತಾಲ್ಲೂಕು ಆಸ್ಪತ್ರೆಗೆ ರವಾನಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಒಟ್ಟಾರೆ ಸಂಕ್ರಮಣ ಹಬ್ಬದ ಪ್ರಯುಕ್ತ ನದಿಯಲ್ಲಿ ಸ್ನಾನ ಮಾಡಲು ಹೋದ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.
-ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
15/01/2022 10:21 pm