ಕೋಲ್ಕತ್ತಾ: ಪಶ್ಚಿಮ ಬಂಗಾಳದ ಉತ್ತರ ಭಾಗದ ಮೈನಾಗುರಿಯ ದೋಮೊಹನಿ ಬಳಿ ಈಶಾನ್ಯ ಗಡಿ ರೈಲ್ವೆ ವಲಯದ ಬಿಕಾನೇರ್-ಗುವಾಹಟಿ ಎಕ್ಸ್ ಪ್ರೆಸ್ ರೈಲು ಹಳಿತಪ್ಪಿದೆ. ಇಂದು ಸಂಜೆ 5 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ 4-5 ಬೋಗಿಗಳು ಸಂಪೂರ್ಣ ಜಖಂಗೊಂಡಿವೆ. ಮೂವರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ.
ರೈಲು ಸಂಖ್ಯೆ15633 ಬಿಕಾನೆರ್ ಎಕ್ಸ್ ಪ್ರೆಸ್ ರಾಜಸ್ಥಾನದ ಬಿಕಾನೇರ್ ನಿಂದ ಹೊರಟಿದ್ದು ಪಾಟ್ನಾ ಮೂಲಕ ಅಸ್ಸಾಂನ ಗುವಾಹಟಿಗೆ ತೆರಳುತ್ತಿದ್ದಾಗ ಜಲ್ಪೈಗುರಿಯ ಮೈನಾಗುರಿ ಬಳಿ ಈ ಘಟನೆ ನಡೆದಿದೆ. ರೈಲು ಮೈನಾಗೂರಿಯಿಂದ ಹಾದು ಹೋಗುವಾಗ ಹಠಾತ್ ಜರ್ಕ್ ಆಯಿತು. ಈ ವೇಳೆ ಅನೇಕ ಭೋಗಿಗಳು ಹಳಿ ತಪ್ಪಿದವು ಎಂದು ಪ್ರಯಾಣಿಕರು ಒಬ್ಬರು ತಿಳಿಸಿದ್ದಾರೆ.
ಈ ಘಟನೆಯಿಂದ ಅನೇಕರು ಗಾಯಗೊಂಡಿದ್ದು, ಗಾಯಾಳುಗಳನ್ನು ಮೈನಾಗುರಿ ಮತ್ತು ಜಲಪೈಗುರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ 20 ಅಂಬುಲೆನ್ಸ್ ಆಗಿಮಿಸಿದ್ದು, ರೈಲ್ವೆ ಇಲಾಖೆ ಇಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ. ಘಟನೆ ಸ್ಥಳಕ್ಕೆ ಈಗಾಗಲೇ ರೈಲ್ವೆ ಪೊಲೀಸರು ಆಗಮಿಸಿದ್ದು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ (ಎನ್ ಡಿಆರ್ಎಫ್) ತಂಡವೂ ಸ್ಥಳಕ್ಕೆ ಆಗಮಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು ಪ್ರಯಾಣಿಕರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಕೋವಿಡ್ ಪರಿಸ್ಥಿತಿಯ ಕುರಿತು ಪ್ರಧಾನಿ ಮೋದಿಯವರೊಂದಿಗೆ ಸಭೆ ನಡೆಸುತ್ತಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಭೆಯಿಂದ ಸ್ವಲ್ಪ ಸಮಯ ನಿರ್ಗಮಿಸಿದರು.
ಈ ಘಟನೆ ಕುರಿತು ಕ್ರಮ ಕೈಗೊಳ್ಳಲು ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ಜಿಲ್ಲಾಡಳಿತಕ್ಕೆ ಸೂಚನೆಗಳನ್ನು ನೀಡಿದ್ದಾರೆ.
PublicNext
13/01/2022 07:56 pm