ದಾವಣಗೆರೆ: ನಿರ್ಮಾಣ ಹಂತದ ಕಟ್ಟಡದ ಸೆಂಟ್ರಿಂಗ್ ಕುಸಿದ ಪರಿಣಾಮ ಮೂವರು ಮೃತಪಟ್ಟ ದಾರುಣ ಘಟನೆ ದಾವಣಗೆರೆ ತಾಲೂಕಿನ ಕುಕ್ಕುವಾಡ ಸಕ್ಕರೆ ಕಾರ್ಖಾನೆಯ ಬಳಿ ನಡೆದಿದೆ.
ರಾಯಚೂರು ಮೂಲದ ಬಸಪ್ಪ (32), ಮಾದಪ್ಪ (32) ಹಾಗೂ ಪಶ್ಚಿಮ ಬಂಗಾಳ ಮೂಲದ ಮಜೀದ್ (28) ಮೃತಪಟ್ಟ ದುರ್ದೈವಿಗಳು. ಐವರು ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಕ್ಕುವಾಡ ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ಘಟಕಕ್ಕಾಗಿ ಕಟ್ಟಡ ನಿರ್ಮಾಣ ಕೆಲಸ ನಡೆಯುತಿತ್ತು. ಈ ವೇಳೆ ಸೆಂಟ್ರಿಂಗ್ ಕುಸಿದಿದೆ. ಇದರಿಂದ ಮಣ್ಣಿನಡಿ ಸಿಲುಕಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ, ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಸುನೀಗಿದ್ದಾರೆ.
ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್. ಎಸ್. ಗಣೇಶ್ ಅವರಿಗೆ ಸೇರಿದ ಸಕ್ಕರೆ ಕಾರ್ಖಾನೆಯಾಗಿದೆ. ಇಂದು ಮಧ್ಯಾಹ್ನ ಕಟ್ಟಡದ ಸೆಂಟ್ರಿಂಗ್ ಕುಸಿತ ಆಗುತ್ತಿದ್ದಂತೆ ಮೂವರು ಮಣ್ಣಿನಡಿ ಸಿಲುಕಿದರು. ಈ ವೇಳೆ ಸ್ಥಳದಲ್ಲಿದ್ದ ಕಾರ್ಮಿಕರು ರಕ್ಷಣೆ ಮಾಡಲು ಪ್ರಯತ್ನಿಸಿದರೂ ಮೂವರು ಮಣ್ಣಿನಡಿ ಸಿಲುಕಿದರು. ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ಮುಟ್ಟಿಸಿದರು. ತಕ್ಷಣವೇ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಕ್ರೇನ್ ಹಾಗೂ ಜೆಸಿಬಿ ಸಹಾಯದ ಮೂಲಕ ಮಣ್ಣಿನೊಳಗೆ ಸಿಲುಕಿ ಹಾಕಿಕೊಂಡಿದ್ದ ಇಬ್ಬರ ಮೃತದೇಹ ಹೊರತೆಗೆಯಲಾಯಿತು. ಮತ್ತೊಬ್ಬನನ್ನು ರಕ್ಷಿಸಿದರೂ ಬದುಕಲಿಲ್ಲ. ಹದಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
PublicNext
04/11/2021 09:58 pm