ಚಿತ್ರದುರ್ಗ : ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ಈಚರ್ ಕ್ಯಾಂಟರ್ ಹಾಗೂ ಟಿಪ್ಪರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ವೃದ್ಧೆ ಸಾವನ್ನಪ್ಪಿದ್ದು, ಉಳಿದ 27 ಮಂದಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಚಳ್ಳಕೆರೆ ರಸ್ತೆಯ ಬಾಲೆನಹಳ್ಳಿ ಗೇಟ್ ಬಳಿ ಬುಧವಾರ ರಾತ್ರಿ 8 ಗಂಟೆಯ ಸಮಯದಲ್ಲಿ ನಡೆದಿದೆ. ಶಿರಾ ತಾಲೂಕಿನ ದ್ವಾರನಕುಂಟೆ ಗ್ರಾಮದ ರತ್ನಮ್ಮ (70) ವರ್ಷ ಮೃತ ವೃದ್ಧೆ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಹಿರಿಯೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ -150ಎ ರಸ್ತೆ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಕಾಮಗಾರಿಗಾಗಿ ಮಣ್ಣು ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್, ಚಳ್ಳಕೆರೆ ಕಡೆಯಿಂದ ಬಂದ ಈಚರ್ ಕ್ಯಾಂಟರ್ ಗೆ ಡಿಕ್ಕಿಯಾಗಿದೆ. ಟಿಪ್ಪರ್ ಲಾರಿ ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೇವಸ್ಥಾನಕ್ಕೆ ಹೋದವರಲ್ಲಿ ಬಹುತೇಕ ಮಂದಿ ಶಿರಾ ನಗರದವರಾಗಿದ್ದಾರೆ ಎನ್ನಲಾಗಿದೆ.
ಟ್ರಾಫಿಕ್ ಜಾಮ್ : ಅಪಘಾತ ಸಂಭವಿಸಿದ ರಭಸಕ್ಕೆ ಸುಮಾರು ಐದು ಕಿಲೋಮೀಟರ್ ದೂರದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಟ್ರಾಫಿಕ್ ಜಾಮ್ ಉಂಟಾಗಿದ್ದ ವಾಹನಗಳನ್ನು ತೆರವುಗೊಳಿಸಲು ಹಿರಿಯೂರು ಗ್ರಾಮಾಂತರ ಪೋಲಿಸರು ಅರೆ ಸಹಾಸ ಪಟ್ಟರು. ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
16/09/2021 10:09 am