ಬೆಂಗಳೂರು: ನಗರದ ಕೋರಮಂಗಲದ, ಮಂಗಳ ಕಲ್ಯಾಣಮಂಟಪದ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತವಾಗಿದ್ದು, 7 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ತಡರಾತ್ರಿ 1:30ರ ವೇಳೆ ಆಡಿ ಕ್ಯೂ 3 ಕಾರು, ಫುಟ್ ಪಾತ್ ಮೇಲಿದ್ದ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಆಡಿ ಕಾರು ಕಟ್ಟಡಕ್ಕೆ ಅಪ್ಪಳಿಸಿದ್ದು ಸ್ಥಳದಲ್ಲೇ ಆರು ಮಂದಿ ಸಾವನ್ನಪ್ಪಿದ್ದಾರೆ. ಇನ್ನೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇನ್ನು ಈ ದುರ್ಘಟನೆಯಲ್ಲಿ ಮೃತಪಟ್ಟ ಕರುಣಾಸಾಗರ್(28) ಡಿಎಂಕೆ ಶಾಸಕ ವೈ.ಪ್ರಕಾಶ್ ಪುತ್ರ. ತಮಿಳುನಾಡಿನ ಹೊಸೂರು ಕ್ಷೇತ್ರದ ಶಾಸಕ ವೈ.ಪ್ರಕಾಶ್ ಪುತ್ರ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ಕಟ್ಟಡ ನಿರ್ಮಾಣ ಸಾಮಗ್ರಿ ಖರೀದಿ ಮಾಡಲು ನಿನ್ನೆ ಸಂಜೆ 5.30ಕ್ಕೆ ಬೆಂಗಳೂರಿಗೆ ಬಂದಿದ್ದ ಕರುಣಾಸಾಗರ್, ನಿನ್ನೆ ರಾತ್ರಿ ಕುಟುಂಬಸ್ಥರಿಂದ ಕರೆ ಬಂದಾಗ ಊಟಕ್ಕೆ ಮನೆಗೆ ಬರುತ್ತೀಯಾ ಎಂದು ಕೇಳಿದಾಗ ಮನೆಯವರ ಬಳಿ ಊಟಕ್ಕೆ ಬರಲ್ಲವೆಂದಿದ್ದ. ಆದ್ರೆ ತಡ ರಾತ್ರಿ 1-2ಗಂಟೆ ಆಸುಪಾಸಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ಮೃತ ಕರುಣಾಸಾಗರ್ ಬೆಂಗಳೂರಿನಲ್ಲೇ ಬಹುತೇಕ ವ್ಯವಹಾರ ಮಾಡುತ್ತಿದ್ದ. ಹಾಗೂ ತಂದೆಯ ಬ್ಯುಸಿನೆಸ್ ನೋಡಿಕೊಳ್ಳುತ್ತಿದ್ದ. ವೆಟ್ ಲಾಸ್ ಹಾಗೂ ಬಿಪಿ ಮೆಡಿಸನ್ ತೆಗೆದುಕೊಂಡು ಬರ್ತೇನೆ ಎಂದು ಮನೆಯಲ್ಲಿ ತಿಳಿಸಿ ಸಾಗರ್ ಬೆಂಗಳೂರಿಗೆ ಹೊರಟಿದ್ದ. ಆದ್ರೆ ಸ್ನೇಹಿತರ ಜೊತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ಮೃತರೆಲ್ಲರೂ ಸ್ನೇಹಿತರಾಗಿದ್ದು, 20ರಿಂದ 30 ವರ್ಷದವರಾಗಿದ್ದಾರೆ. ಹೊಸೂರು ಮೂಲದ ಕರುಣಾಸಾಗರ್, ಪತ್ನಿ ಬಿಂದು(28), ಕೇರಳ ಮೂಲದ ಅಕ್ಷಯ್ ಗೋಯಲ್, ಇಶಿತಾ(21), ಧನುಷಾ(21), ಹುಬ್ಬಳ್ಳಿಯ ರೋಹಿತ್, ಹರಿಯಾಣ ಮೂಲದ ಉತ್ಸವ್ ಮೃತ ದುರ್ದೈವಿಗಳು.
PublicNext
31/08/2021 09:11 am