ಮಂಗಳೂರು: ಆಡಿನ ಮರಿಯೊಂದನ್ನು ಉಳಿಸಲು ಹೋದ ಯುವಕನೋರ್ವನು ತಾನೇ ರೈಲಿನಡಿ ಸಿಲುಕಿ ಕಾಲನ್ನೇ ಕಳೆದುಕೊಂಡ ಹೃದಯವಿದ್ರಾವಕ ಘಟನೆ ನಗರದ ಜೋಕಟ್ಟೆಯಲ್ಲಿ ಶನಿವಾರ ನಡೆದಿದೆ. ಬೈಕಂಪಾಡಿ ಜೋಕಟ್ಟೆ ಅಂಗಾರಗುಂಡಿ ನಿವಾಸಿ ಚೇತನ್ ಕುಮಾರ್(21) ಗಾಯಗೊಂಡವರು.
ಚೇತನ್ ಕುಮಾರ್ ಜೋಕಟ್ಟೆಯ ರೂಟ್ ನಂಬರ್ 2 ಖಾಸಗಿ ಬಸ್ ನಲ್ಲಿ ಕಂಡಕ್ಟರ್ ಆಗಿದ್ದರು. ಇಂದು ಬೆಳಗ್ಗೆ ಕೆಲಸಕ್ಕೆ ಹೋಗುತ್ತಿದ್ದಾಗ ಆಡಿನ ಮರಿಯೊಂದು ರೈಲು ಹಳಿಯಲ್ಲಿ ಓಡುತ್ತಿರುವುದನ್ನು ಚೇತನ್ ನೋಡಿದ್ದಾರೆ. ಅದನ್ನು ರಕ್ಷಿಸಲು ಧಾವಿಸಿ, ಆಡಿನ ಮರಿಯನ್ನು ರೈಲು ಹಳಿಯಿಂದ ದೂಡಿ ಈಚೆಗೆ ಬರುವಷ್ಟರಲ್ಲಿ ರೈಲು ಅವರ ಕಾಲಿನ ಮೇಲೆಯೇ ಹರಿದಿದೆ. ಪರಿಣಾಮ ಎರಡೂ ಕಾಲುಗಳಿಗೆ ಗಂಭೀರವಾಗಿ ಗಾಯವಾಗಿದೆ.
ಚೇತನ್ ಗಾಯಗೊಂಡು ಹಳಿಯ ಮೇಲೆಯೇ ಬಿದ್ದು ನರಳಾಡುತ್ತಿರುವುದನ್ನು ಕಂಡ ಸ್ಥಳೀಯರು ನಗರದ ಎ.ಜೆ. ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಪರೀಕ್ಷಿಸಿ ಖರ್ಚು ಮಾಡಿದಲ್ಲಿ ಒಂದು ಕಾಲನ್ನು ಉಳಿಸಬಹುದೆಂದು ಹೇಳಿದ್ದಾರೆ. ಬಡ ಕುಟುಂಬದ ಚೇತನ್ ಕುಮಾರ್ ಐವರು ಮಕ್ಕಳಲ್ಲಿ ಹಿರಿವರಾಗಿದ್ದು, ಉಳಿದ ನಾಲ್ಕು ಮಂದಿ ಶಾಲೆ ಕಲಿಯುತ್ತಿದ್ದಾರೆ. ಇವರ ದುಡಿಮೆಯಿಂದಲೇ ಮನೆ ನಡೆಯುತ್ತಿದ್ದು, ಇದೀಗ ಕುಟುಂಬಕ್ಕೇ ದಿಕ್ಕೇ ತೋಚದಂತಾಗಿದೆ. ಈ ಯುವಕನ ಚಿಕಿತ್ಸೆಗೆ ದಾನಿಗಳು, ಸ್ಥಳೀಯ ಜನಪ್ರತಿನಿಧಿಗಳ ನೆರವಿಗೆ ಕುಟುಂಬ ಕಾಯುತ್ತಿದೆ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
28/08/2021 10:56 pm