ಶಿವಮೊಗ್ಗ: ಮನೆಯಲ್ಲಿ ಪುಟ್ಟ ಮಕ್ಕಳಿದ್ರೆ ಎಷ್ಟು ಜಾಗೃತಿವಹಿಸಿದರೂ ಕಡಿಮೆಯೇ… ಅವರ ತುಂಟಾಟ ಕೆಲವೊಮ್ಮೆ ಪ್ರಾಣಕ್ಕೆ ಕುತ್ತಾಗಿ ಬಿಡತ್ತೇ…
ಹೌದು ಮನೆಯಲ್ಲಿ ಆಟವಾಡಿಕೊಂಡಿದ್ದ ಒಂದು ವರ್ಷ ಮಗು ಅಡಕೆ ನುಗ್ಗಿ ದುರಂತ ಅಂತ್ಯ ಕಂಡ ಹೃದಯವಿದ್ರಾವಕ ಘಟನೆ ತೀರ್ಥಹಳ್ಳಿ ತಾಲೂಕಿನ ಹೆದ್ದೂರಿನಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ.ಸಂದೇಶ್ ಮತ್ತು ಅರ್ಚನಾ ದಂಪತಿ ಪುತ್ರ ಶ್ರೀಹಾನ್(1) ಮೃತ. ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಸಂದೇಶ್, ಕೊರೊನಾ ಸಂದರ್ಭದಿಂದ ಹೆದ್ದೂರಿನ ಮನೆಯಲ್ಲಿ ಮಗು ಬಿಟ್ಟಿದ್ದರು. ಭಾನುವಾರ ಬೆಂಗಳೂರಿಗೆ ಕರೆದುಕೊಂಡು ಹೋಗುವ ಆಲೋಚನೆಯಲ್ಲಿದ್ದರು. ಅಷ್ಟರಲ್ಲಿ ಅಡಕೆ ರೂಪದಲ್ಲಿ ಬಂದ ಜವರಾಯ ಮಗುವಿನ ಪ್ರಾಣ ಹೊತ್ತೊಯ್ದಿದ್ದಾನೆ.
ಇತ್ತೀಚೆಗೆ ಆರೋಗ್ಯ ಇಲಾಖೆ ಆಯೋಜಿಸಿದ್ದ ಶಿಶು ಪ್ರದರ್ಶನ ಕಾರ್ಯಕ್ರಮದಲ್ಲಿ ಶ್ರೀಹಾನ್ ಗೆ 'ಆರೋಗ್ಯವಂತ' ಮಗು ಎಂಬ ಪುರಸ್ಕಾರ ಜತೆಗೆ ನಗದು ಬಹುಮಾನ ನೀಡಿ ಗೌರವಿಸಲಾಗಿತ್ತು.ಶನಿವಾರ ಬೆಳಗ್ಗೆ ಮನೆಯಲ್ಲಿ ಆಟವಾಡಿಕೊಂಡಿದ್ದ ಶ್ರೀಹಾನ್, ಹರಿವಾಣ ತಟ್ಟೆಯಲ್ಲಿದ್ದ ಅಡಕೆ ನುಂಗಿ ಉಸಿರುಗಟ್ಟಿ ಒದ್ದಾಡುತ್ತಿದ್ದ.
ಕೂಡಲೇ ಮಗುವನ್ನು ಕಟ್ಟೆಹಕ್ಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು. ಅಲ್ಲಿಂದ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸಲಿಲ್ಲ. ಮಗುವಿನ ಅಗಲಿಕೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
07/02/2021 08:51 am