ಜಿಲ್ಲೆಯ ಮೊಳಕಾಲ್ಮೂರು ಬಳಿ ಭೀಕರ ರಸ್ತೆ ಅಪಘಾತ ನಡೆದಿದೆ. ಸ್ಥಳದಲ್ಲಿಯೇ ಐದು ಜನರು ಮೃತಪಟ್ಟಿದ್ದು, 7 ಜನರು ಗಾಯಗೊಂಡಿದ್ದಾರೆ.
ಮುಂಜಾನೆ ಮೊಳಕಾಲ್ಮೂರು ತಾಲೂಕಿನ ಬಿ. ಜಿ. ಕೆರೆ ಗ್ರಾಮದ ಬಳಿ ಬಸ್ ಮತ್ತು ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಕ್ರೂಸರ್ ವಾಹನದಲ್ಲಿದ್ದ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮೃತಪಟ್ಟವರನ್ನು ತಿಮ್ಮಣ್ಣ (40), ರತ್ನಮ್ನ (38), ಮಹೇಶ್ (19), ದುರ್ಗಪ್ಪ (16) ಎಂದು ಗುರುತಿಸಲಾಗಿದೆ. ಮತ್ತೊಬ್ಬ 55 ವರ್ಷದ ವೃದ್ಧನ ಗುರುತು ಪತ್ತೆಯಾಗಿಲ್ಲ. ತಿಮ್ಮಣ್ಣ ಮತ್ತು ರತ್ಮಮ್ಮ ಪತಿ-ಪತ್ನಿಯರು. ಎಲ್ಲರೂ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನವರು.
ರಾಯಚೂರು ಜಿಲ್ಲೆಯ ಲಿಂಗಸಗೂರಿನಿಂದ ಕ್ರೂಸರ್ ಬೆಂಗಳೂರಿಗೆ ತೆರಳುತ್ತಿತ್ತು. ಬೆಂಗಳೂರಿನಿಂದ ಲಿಂಗಸಗೂರಿನತ್ತ ಬಸ್ ತೆರಳುತ್ತಿತ್ತು. ಮೊಳಕಾಲ್ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಮೃತರೆಲ್ಲರೂ ಕೆಲಸ ಹುಡುಕಿಕೊಂಡು ಬೆಂಗಳೂರು ನಗರಕ್ಕೆ ಹೊರಟಿದ್ದರು. ಅಪಘಾತದಲ್ಲಿ 7 ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಪಘಾತದ ತೀವ್ರತೆಗೆ ಕ್ರೂಸರ್ ವಾಹನ ಜಖಂಗೊಂಡಿದೆ. ಕೆಲವು ಮೃತದೇಹಗಳೂ ಛಿದ್ರವಾಗಿವೆ. ಮೊಳಕಾಲ್ಮೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
PublicNext
27/12/2020 07:55 am